
ಮಧುಗಿರಿ: ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ಹಿಂದಿನ ಮೋದಿ ಸರಕಾರ 5300 ಕೋಟಿ ನೀಡಿ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ ಇಲ್ಲಿಯವರೆಗೂ ರಾಜ್ಯ ಸರಕಾರ ತನ್ನ ಪಾಲಿನ ಹಣ ಮೀಸಲಿಟ್ಟಿಲ್ಲ, ಅರಣ್ಯವನ್ನು ಕೂಡ ತೆರವುಗೊಳಿಸಿಲ್ಲ.. ಕಾಮಗಾರಿಯ ಬಗ್ಗೆ ರೂಪುರೇಷೆ ಸಿದ್ಧಪಡಿಸದೆ ಗೊಂದಲದಲ್ಲಿ ಮುಳುಗಿದೆ ಎಂದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ತೆರಿಯೂರು ಶ್ರೀ ಸುಭ್ರಮಣ್ಯಸ್ವಾಮಿ ರಥೋತ್ಸ ಹಾಗೂ ಐ.ಡಿ ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಶ್ರೀ ಲಕ್ಷಿö್ಮನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ನೀರಾವರಿ ವಿಚಾರಕ್ಕೆ ನರೇಂದ್ರ ಮೋದಿ ಎಂದಿಗೂ ವಿರೋಧಿಸಿಲ್ಲ. ನಾನೂ ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಬದ್ಧತೆಯನ್ನು ಹೊಂದಿದ್ದೇವೆ. ಆದರೆ ರಾಜ್ಯ ಸರಕಾರದ ಮಂತ್ರಿಗಳು ಇಂದಿಗೂ ಈ ಬಗ್ಗೆ ಸಕಾರಾತ್ಮಕವಾಗಿ ಬಂದು ಚರ್ಚಿಸಿಲ್ಲ ಎಂದರು.
ರಾಜ್ಯ ಸರಕಾರದ ಸಚಿವರು ಬಂದು ಕೇಳಲು ಬದ್ಧತೆಯಿಲ್ಲದೆ ನಾವು ಏನು ಮಾಡಲು ಸಾಧ್ಯ. ಭದ್ರಾ ಮೇಲ್ದಂಡೆಗೆ 5300 ಕೋಟಿ ನೀಡಿಲ್ಲ ಎನ್ನುವ ರಾಜ್ಯ ಸರಕಾರ ಮೊದಲು ತನ್ನ ಪಾಲಿನ ಹಣವನ್ನು ಮೀಸಲಿಟ್ಟರೆ ನಾವು ತಕ್ಷಣ ಬಿಡುಗಡೆ ಮಾಡುತ್ತೇವೆ. ಆದರೆ ಕೇಂದ್ರ ಕೊಟ್ಟ ಹಣವನ್ನು ಬೇರೆಯದ್ದಕ್ಕೆ ಉಪಯೋಗಿಸುವ ಅವಕಾಶವಿದ್ದು ನೀರಾವರಿಗೆ ಬಳಕೆಯಾಗಲ್ಲ. ಇದನ್ನು ಅರಿತಿರುವ ಕೇಂದ್ರವು ಯೋಜನೆಯ ಬಗ್ಗೆ ಕಾದು ನೋಡುತ್ತಿದೆ. ಈ ಸಮಸ್ಯೆಗೆ ರಾಜ್ಯ ಸರಕಾರವೇ ಹೊಣೆ ಹೊರತು ಕೇಂದ್ರವಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಮಧುಗಿರಿ ಸೇರುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಈಗಾಗಲೇ ರಾಜ್ಯ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅಧಿಕಾರದ ರಾಜಕೀಯ ತೊಳಲಾಟದಲ್ಲಿದ್ದಾರೆ. ಗೊಂದಲ ಬಗೆಹರಿದ 1 ವರ್ಷದ ನಂತರ ಮಧುಗಿರಿ ಸೇರಿಸುವ ಕೆಲಸ ನಾನೇ ಮಾಡುತ್ತೇನೆ ಎಂದರು.
ಮಧುಗಿರಿ ಕೈಗಾರಿಕಾ ಪ್ರದೇಶಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು ಸರಕಾರ ಕಡಿಮೆ ಹಣ ನೀಡಲು ಮುಂದಾಗಿದೆ. ಆದರೆ 17 ಲಕ್ಷದಿಂದ 22 ಲಕ್ಷಕ್ಕೆ ಏರಿಸಿದರೆ ರೈತರು ಭೂಮಿ ನೀಡಬಹುದು ಎಂದು ಹೇಳಿದ್ದೇನೆ. ಮಧುಗಿರಿಯಲ್ಲಿ 35 ಗ್ರಾಮಗಳಲ್ಲಿ ಪ್ಲೋರೈಡ್ ನೀರಿದ್ದು ನನ್ನ ಅನುದಾನದಲ್ಲಿ 9 ಆರ್.ಓ ಘಟಕವನ್ನು ಮೊದಲ ಹಂತವಾಗಿ ನೀಡುತ್ತಿದ್ದೇನೆ. ಜೆಜೆಎಂ ಕಾಮಗಾರಿಗಳಿಗೆ ರಾಜ್ಯದ ಪಾಲು 28 ಸಾವಿರ ಕೋಟಿ ನೀಡಿದ್ದೇವೆ. ಆದರೆ ಕೆಲಸ ಪೂರ್ಣಗೊಂಡ ಪ್ರಮಾಣ ಪತ್ರ ನೀಡಿದರರೆ ಉಳಿದ ಅನುದಾನ ನೀಡಲು ಸಾಧ್ಯ, ಆದರೆ ರಾಜ್ಯ ಸರಕಾರ ಕೆಲಸ ಪೂರ್ಣಗೊಳಿಸದೆ ಸುಖಾಸುಮ್ಮನೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಹಿಂದೆ 3 ಕೋಟಿ ಜನರು ಶುದ್ಧ ಕುಡಿಯುವ ನೀರು ಕುಡಿಯುತ್ತಿದ್ದು ಮೋದಿ ಬಂದ ಮೇಲೆ 15 ಕೋಟಿ ಕುಟುಂಬಗಳು ಕುಡಿಯುತ್ತಿವೆ ಎಂದು ಸೋಮಣ್ಣ ತಿಳಿಸಿದರು.
ಶಿರಾ-ಮಧುಗಿರಿ ಗೌರಿಬಿದನೂರು ಸೇರುವ 52 ಕಿ.ಮೀ ಮಾರ್ಗದಲ್ಲಿ 4 ಪಥದ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ. ಶಿರಾ-ಬಡವನಹಳ್ಳಿಯ 20 ಕಿ.ಮೀ ರಸ್ತೆಗೆ 588 ಕೋಟಿ ಅನುದಾನ ಬಂದಿದೆ. ಬಡವನಹಳ್ಳಿ-ಭೈರೇನಹಳ್ಳಿಯ ರಸ್ತೆ ಅಭಿವೃದ್ದಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಲಿದೆ. ತುಮಕೂರು ರಾಯದುರ್ಗ ರೈಲ್ವೆ ಯೋಜನೆಯು 2 ವರ್ಷದಲ್ಲಿ ಪೂರ್ಣಗೊಳಿಸಿ ರೈಲುಗಳು ಓಡಾಡಲಿವೆ. ಈಗಾಗಲೇ ಹಲವು ರೈಲ್ವೆ ಮಾರ್ಗದಲ್ಲಿ 28 ಮೇಲು ಸೇತುವೆ ಕಾರ್ಯ ನಡೆಯುತ್ತಿದೆ ಎಂದರು.

More Stories
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು
ಫುಟ್ಪಾತ್ ಒತ್ತುವರಿ ತೆರವಿಗೆ ಮೂರ್ಹತ ಫಿಕ್ಸ್