
ಮಧುಗಿರಿ: ಇತ್ತೀಚಿನ ದಿನಗಳಲ್ಲಿ ತಾಲ್ಲೂಕು ಆಡಳಿತದಿಂದ ದಲಿತ ಸಮುದಾಯದ ಸರ್ಕಾರಿ ಅಧಿಕಾರಿಗಳಿಗೆ ಮುಖಂಡರಿಗೆ ಹಾಗೂ ಜನಾಂಗದವರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಡಾ.ಪುರುಷೋತ್ತಮ್ ಅವರ ತೇಜೋವಧೆ ಮಾಡಲು ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಸಂಚು ರೂಪಿಸಿ ಅವರ ಸಹಿಯನ್ನು ಮತ್ತು ಮೋಹರನ್ನು ಸೃಷ್ಠಿಸಿ ಅನರ್ಹರಿಗೆ ವಯಸ್ಸಿನ ದೃಢೀಕರಣ ಪತ್ರ , ಅಂಗವಿಕಲ ಪ್ರಮಾಣಪತ್ರ ನೀಡಿರುವುದಕ್ಕೆ ಪುರುಷೋತ್ತಮ್ ರವರೆ ಕಾರಣವೆಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ.
ಪುರುಷೋತ್ತಮ್ ಅವರ ಕರ್ತವ್ಯದ ಆವಧಿಯೇ ಅಲ್ಲದಿದ್ದರೂ ಅಲ್ಲಿನ ಆಡಳಿತ ವರ್ಗ ಹಾಗೂ ಸಿಬ್ಬಂದಿ ಆಸ್ಪತ್ರೆಯ ನೋಟಿಸ್ ಬೋರ್ಡ್ನಲ್ಲಿ ಪುರುಷೋತ್ತಮ್ ಅವರ ಹೆಸರು ಬರೆದು, ಮಾಧ್ಯಮದವರಿಗೆ ಸುಳ್ಳು ಮಾಹಿತಿ ನೀಡಿ ವೈದ್ಯಾಧಿಕಾರಿ ವಿರುದ್ಧ ಕರ್ತವ್ಯ ನಿರ್ವಹಿಸುವ ಆವಧಿಯಲ್ಲಿ ಗೈರಾಗಿದ್ದಾರೆಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗುವಂತೆ ಮಾಡಿ ವೈದ್ಯರ ತೇಜೋವಧೆ ಮಾಡಿದ್ದಾರೆಂದು ಕಿಡಿಕಾರಿದರು.
ಕೂಡಲೇ ಪೊಲೀಸ್ ಇಲಾಖೆಯವರು ಪುರುಷೋತ್ತಮ್ ಅವರ ವಿರುದ್ಧ ದಾಖಲಿಸಿರುವ ಪ್ರಕರಣದ ಎಫ್‌ಐಆರ್ ಅನ್ನು ರದ್ದುಪಡಿಸಿ ಬಿ ರಿಪೋರ್ಟ್ ಸಲ್ಲಿಸಬೇಕೆಂದು ಆಗ್ರಹಿಸಿದರು.
ದಲಿತ ಸಮುದಾಯದ ವೈದ್ಯಾಧಿಕಾರಿ ಡಾ. ಪುರುಷೋತ್ತಮ್ ರವರ ಅಭಿವೃದ್ಧಿಯನ್ನು ಸಹಿಸದೇ ಅವರನ್ನೇ ಗುರಿಯಾಗಿಸಿಕೊಂಡು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು ತಾಲ್ಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಇಂತಹ ಕುತಂತ್ರಗಳನ್ನು ತಡೆಗಟ್ಟಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು.
ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಉಗ್ರ ಹೋರಾಟ ಮಾಡಿ ತಾಲ್ಲೂಕು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜೀವಿಕಾ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತದಲ್ಲಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪ ಹೆಚ್ಚಾಗಿದ್ದು, ವೈದ್ಯರುಗಳ ಮಧ್ಯೆ ಮನಸ್ತಾಪ ಉಂಟಾಗಲು ಕೆಲವರು ಪ್ರೇರೆಪಿಸುತ್ತಿದ್ದಾರೆ. ಅನಾವಶ್ಯಕ ಖಾಸಗಿ ವ್ಯಕ್ತಿಗಳ ಪ್ರವೇಶ ತಡೆಗಟ್ಟಬೇಕು ಇಂತಹ ಖಾಸಗಿ ವ್ಯಕ್ತಿಗಳಿಂದ ವೈದ್ಯರನ್ನು ದೂರವಿಡ ಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೆಲ್ಲದ ಮಡಗು ಶಿವಣ್ಣ, ಜೀವಿಕಾ ಚಿಕ್ಕಮ್ಮ, ಸಿದ್ದಾಪುರ ರಂಗಾಶ್ಯಾಮಣ್ಣ, ಎಸ್.ಸಂಜೀವಯ್ಯ, ಬೆಲ್ಲದಮಡಗು ಭರತ್ ಕುಮಾರ್, ಮಾದೇನಹಳ್ಳಿ ರಾಮಣ್ಣ, ಹನುರಾಜ್, ಪೋಸ್ಟ್ ಮರಿಯಪ್ಪ, ಡಿಜೆಎಸ್ ಕೋಟೆ ಕಲ್ಲಪ್ಪ, ಅನಂತ್ ರೆಡ್ಡಿ, ದೊಡ್ಡೇರಿ ಮಹಾಲಿಂಗಯ್ಯ, ಆರ್.ಕೃಷ್ಣಪ್ಪ, ಬ್ರಹ್ಮಕುಮಾರ್, ಪ್ರೆಸ್ ಕಂಬಣ್ಣ ಮತ್ತಿತರರು ಇದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು