
ಮಧುಗಿರಿ: ಪಟ್ಟಣಕ್ಕೆ ಜುಲೈ -6ರ ಬುಧವಾರದಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆಗಮಿಸುತ್ತಿದ್ದು ಧರ್ಮಸ್ಥಳ ಸಂಘದ ವತಿಯಿಂದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಟ್ರಸ್ಟ್ ನ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ .ಶೀನಪ್ಪ ತಿಳಿಸಿದರು.
ಮಂಗಳವಾರ ಪಟ್ಟಣದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ತಾಲೂಕಿನ ಗಣ್ಯರ ಸಮ್ಮುಖದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆ ಯಲ್ಲಿ ಮಾತನಾಡಿದ ಅವರು ಅಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಾಧನಾ ಸಮಾವೇಶದಲ್ಲಿ ವಿವಿಧ ಅನುದಾನಗಳ ವಿತರಣಾ, ಐವತ್ತು ಮಂದಿಗೆ ಆಟೋಗಳ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪೂಜ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಬೃಹತ್ ಮೆರವಣಿಗೆ ಮೂಲಕ ಕರೆತರಲಾಗುವುದು. ಸ್ವ ಉದ್ಯೋಗ ಮಳಿಗೆಗಳ ಉದ್ಗಾಟನೆ, ಬ್ಯಾಂಕಿನ ನೆರವಿನ ಮೂಲಕ ,ಮಹಿಳಾ ಸಬಲೀಕರಣ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಧುಗಿರಿ ತಾಲ್ಲೂಕಿನಲ್ಲಿ ಈಗಾಗಲೇ ಗ್ರಾಮ ಅಭಿವದ್ಧಿ ಯೋಜನೆಯಡಿ 3300 ಸಂಘಗಳು ಇದ್ದು ಮೂವತ್ತು ಸಾವಿರ ಸದಸ್ಯರಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಮೂವತ್ತು ಸಾವಿರ ಸಂಘಗಳಿದ್ದು 2. 5ಲಕ್ಷ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು. ಮಧುಗಿರಿ ತಾಲ್ಲೂಕಿನಲ್ಲಿ ಪ್ರತಿಯೊಬ್ಬ ಸದಸ್ಯರ ಹತ್ತು ರೂಗಳ ಉಳಿತಾಯದಂತೆ ಇಲ್ಲಿಯವರೆಗೂ 12 ಕೋಟಿ ರೂ ಸಂಗ್ರಹವಾಗಿದ್ದು, 100 ಕೋಟಿ ರೂ ಗಳವರೆಗೂ ಸಾಲ ನೀಡಲಾಗಿದೆ. ಪ್ರತಿ ವಾರ ಮರು ಪಾವತಿ ಶೇಕಡಾ ನೂರರಷ್ಟು ಆಗುತ್ತಿದೆ ಎಂದರು.
ರಾಜ್ಯದಲ್ಲಿ 500 ಕೆರೆಗಳ ಪುನಶ್ಚೇತನಗೊಳಿಸಿದ್ದು ತುಮಕೂರು ಜಿಲ್ಲೆಯಲ್ಲಿ ನಲವತ್ತು ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ 5ಕೆರೆಗಳನ್ನು 6ಕೋಟಿ ರೂ ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಸಂಬAಧಪಟ್ಟವರಿಗೆ ಹಸ್ತಾಂತರಿಸಲಾಗಿದೆ ಎಂದರು.
ಇದಲ್ಲದೆ ಸಂಘದ ಸದಸ್ಯರುಗಳ ಮಕ್ಕಳ ವಿದ್ಯಾರ್ಜನೆಗಾಗಿ 5ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣಕ್ಕೆ ಪ್ರತಿ ತಿಂಗಳು ಅನುದಾನ, ವಾತ್ಸಲ್ಯ ಕಾರ್ಯಕ್ರಮದಡಿ ರಾಜ್ಯದ ಹದಿನೈದು ಸಾವಿರ ವೃದ್ಧರಿಗೆ ಮನೆ ನಿರ್ಮಾಣ ಮತ್ತು ಶೌಚಾಲಯ ನಿರ್ಮಾಣ ಮಾಡಿಕೊಡಲಾಗಿದೆ.ವಿಶೇಷ ಚೇತನರಿಗೆ ಅನುದಾನ, ಪರಿಸರ ಸಂರಕ್ಷಣೆ, ಹಾಲಿನ ಡೈರಿಗಳ ಕಟ್ಟಡಗಳ ನಿರ್ಮಾಣಕ್ಕೆ, ದೇವಸ್ಥಾನಗಳ ಪುನಶ್ಚೇತನಕ್ಕೆ, ವ್ಯಸನಮುಕ್ತ ಮದ್ಯ ವರ್ಜನ ಶಿಬಿರಗಳು, ಶಾಲೆಗಳಿಗೆ ಜ್ಞಾನ ವಿಕಾಸ ಯೋಜನೆಯಲ್ಲಿ ಸಾಕಷ್ಟು ಅನುಕೂಲ ಮಾಡಲಾಗಿದೆಂದರು.
ಈ ಸಂದರ್ಭದಲ್ಲಿ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪುರಸಭಾ ಸದಸ್ಯೆ ಪಾರ್ವತಮ್ಮ, ಸದಸ್ಯ ಲಾಲಾಪೇಟೆ ಮಂಜುನಾಥ್, ಮಾಜಿ ಸದಸ್ಯರಾದ ಅರ್.ಎಲ್.ಎಸ್. ರಮೇಶ್, ಬಿ.ಆರ್.ಸತ್ಯನಾರಾಯಣ, ಮುಖಂಡರುಗಳಾದ ಡಿ.ಹೆಚ್. ನಾಗರಾಜು , ಯತೀಶ್ ಬಾಬು, ಮೂಡ್ಲಗಿರೀಶ್, ಪ್ರೆಸ್ ಕರಿಯಣ್ಣ, , ಗ್ರಾ.ಪಂ ಮಾಜಿ ಉಪಾಧ್ಯಕ್ಷ ಆರ್.ಟಿ. ಪ್ರಭು, ಎಸ್ ಬಿಟಿ ರಾಮು, ಸಿಸ್ಟಲ್ ಮಂಜುನಾಥ್, ತುಮಕೂರು ಜಿಲ್ಲಾ ನಿರ್ದೇಶಕ ದಿನೇಶ್, ಮಧುಗಿರಿ ತಾಲ್ಲೂಕಿನ ಯೋಜನಾಧಿಕಾರಿ ದಿನೇಶ್ ಕುಮಾರ್ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು