web stats

Madhugirinews

#1NewsofMadhugiri

ಬಡತನದ ಬೇಗೆ ದಾಟಿ ಯಶಸ್ಸು ಕಂಡ ವಿದ್ಯಾರ್ಥಿ ಅರುಣ

ತುಮಕೂರು: ಗುಬ್ಬಿ ತಾಲ್ಲೂಕಿನ ಚೇಳೂರಿನ ಬಡ ಕುಟುಂಬದಲ್ಲಿ ಜನಿಸಿ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಪಿಯುಸಿ ಯಲ್ಲಿ ಶ್ರೇಷ್ಠ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿ ಡಿ ಎನ್ ಅರುಣನ ಕಥೆ ರೋಚಕ ಇದು.

ಹುಟ್ಟಿದ ದಿನದಿಂದಲೂ ಕಾರಣಾಂತರಗಳಿAದ ತಂದೆಯ ಒಡನಾಟವಿಲ್ಲದ ಅರುಣ, ತಾಯಿಯ ಮಡಿಲಲ್ಲಿ ಬೆಳೆಯುತ್ತಾ ಬಂದ. ತಾಯಿ ಸಿದ್ಧಗಂಗಮ್ಮ ತೆಂಗಿನ ಪೊರಕೆ ಕಡ್ಡಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಉದ್ಯೋಗದಿಂದ ಮಗನ ಓದು ಮತ್ತು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಶ್ರೀ ಮಲ್ಲಿಕಾರ್ಜುನ ಸ್ವಾಮಿ ಫ್ರೌಡಶಾಲೆಯ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಹತ್ತನೆಯ ತರಗತಿ ಪರೀಕ್ಷೆಯಲ್ಲಿ97.6% ಅಂಕಗಳನ್ನು ಪಡೆದು ಸಪ್ತಗಿರಿ ಪದವಿ ಪೂರ್ವ ಕಾಲೇಜನ್ನು ಸೇರಿದ. ಫ್ರೌಡಶಾಲೆಯ ಶಿಕ್ಷಕರೊಬ್ಬರು ಶಾಲಾಶುಲ್ಕವನ್ನು ಪಾವತಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಸಪ್ತಗಿರಿ ಕಾಲೇಜಿನ ಆಡಳಿತ ಮಂಡಳಿಯು ಸಹ ಸರ್ಕಾರ ವಿಧಿಸಿರುವ ಶುಲ್ಕವನ್ನು ಮಾತ್ರ ಸಂಗ್ರಹಿಸಿ ವಿದ್ಯಾರ್ಥಿಗೆ ಉಚಿತವಾಗಿ ಪಠ್ಯಪುಸ್ತಕಗಳು, ನೋಟ್ಸ್ ಪುಸ್ತಕಗಳು ಮತ್ತು ಮಾರ್ಗದರ್ಶನ ಪುಸ್ತಕಗಳನ್ನು ನೀಡಿದ್ದಾರೆ ಎಂದು ವಿದ್ಯಾರ್ಥಿ ಅರುಣ ಕೃತಜ್ಞತಾ ಪೂರಕವಾಗಿ ನೆನಪಿಸಿಕೊಳ್ಳುತ್ತಾನೆ. ಪ್ರಥಮ ಪಿಯುಸಿ ಯಲ್ಲಿ ಚೇಳೂರಿನಿಂದ ಕಾಲೇಜಿಗೆ ಬಸ್ಸಿನಲ್ಲಿ ಪ್ರವಾಸ ಮಾಡಿದ ಮತ್ತು ದ್ವಿತೀಯ ಪಿಯುಸಿಯಲ್ಲಿ ಹಿಂದುಳಿದ ವರ್ಗದ ವಸತಿನಿಲಯದಲ್ಲಿ ಉಳಿದುಕೊಂಡು ಅಧ್ಯಯನ ಮುಂದುವರೆಸಿದ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರಿಂದ ಪ್ರಥಮ ಪಿಯುಸಿ ದಾಖಲಾತಿ ಪಡೆದಾಗ 2, 3 ತಿಂಗಳ ವೆರೆಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಯಿತು. ಆದರೆ ಕಾಲೇಜಿನ ಶಿಕ್ಷಕರು ಕ್ಲಿಷ್ಟವಾದ ವಿಜ್ಞಾನ ಪದಗಳ ಅರ್ಥವನ್ನು ಮತ್ತು ಪರಿಕಲ್ಪನೆಯನ್ನು ಕನ್ನಡದಲ್ಲಿ ವಿವರಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರ ಕೊಡುಗೆ ಬಹು ದೊಡ್ಡದು” ಎಂದು ಅರುಣ ಧನ್ಯವಾದಗಳನ್ನು ಹೇಳುತ್ತಾನೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ-98, ಇಂಗ್ಲೀಷ್-90, ಭೌತಶಾಸ್ತ್ರ-99, ರಸಾಯನಶಾಸ್ತ್ರ-94, ಗಣಿತ-100 ಮತ್ತು ಜೀವಶಾಸ್ತ್ರ-98 ಅಂಕಗಳನ್ನು ಪಡೆದು ಒಟ್ಟಾರೆ 96.5% ಹಾಗೂ 579 ಅಂಕಗಳನ್ನು ಪಡೆದಿರುವುದು ಅತ್ಯಂತ ಸಂತೋಷದ ವಿಷಯವೆಂದು ಸಪ್ತಗಿರಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಹಾಗೂ ಶಿಕ್ಷಕರು ಅರುಣನನ್ನು ಅಭಿನಂದಿಸಿದ್ದಾರೆ.ಪ್ರಸ್ತುತ ಜೆಇಇ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ಅರುಣ “ಭವಿಷ್ಯದಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾನೆ ಮುಂದಿನ ದಿನಗಳಲ್ಲಿ ಈ ವಿದ್ಯಾರ್ಥಿ ಕನಸು ನನಸಾಗಲಿ ಎಂಬುದು ನಮ್ಮ ಮಧುಗಿರಿ ನ್ಯೂಸ್ ಆಶಯವಾಗಿದೆ.

You may have missed