
ತುಮಕೂರು ವಿಶ್ವವಿದ್ಯಾಲಯದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ಈ ಬಗ್ಗೆ ಗೌರವಾನ್ವಿತ ರಾಜ್ಯಪಾಲರಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ತುಮಕೂರಿನ ಹಲವಾರು ಚಿಂತಕರು ಬೆಂಗಳೂರಿನ ರಾಜಭವನಕ್ಕೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಮಸ್ಯೆಗಳ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟು ಮಾತನಾಡಿದ ಮುರಳೀಧರ ಹಾಲಪ್ಪ ಅವರು, ತುಮಕೂರು ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಪುನರುತ್ಥಾನಗೊಳಿಸಬೇಕು, ವಿಶ್ವವಿದ್ಯಾಲಯದಲ್ಲಿ ಕ್ರೀಡಾಪಟುಗಳ ಶೈಕ್ಷಣಿಕ ಹಾಗೂ ಕ್ರೀಡೆಯ ಖರ್ಚು ಭರಿಸಿ ದತ್ತು ಪಡೆಯುವ ಪದ್ಧತಿ ಆರಂಭಿಸಬೇಕು. ಪ್ರತಿಭೆಗಳನ್ನು ಗುರುತಿಸಿ ಸಾಧಕರಿಗೆ ಅನುದಾನ, ಹುದ್ದೆಗಳಂತಹ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಕ್ರೀಡಾ ಬೋಧಕರ ಹಾಗೂ ಇತರೆ ಹುದ್ದೆಗಳ ನೇಮಕಕ್ಕೆ ಆದ್ಯತೆ ನೀಡಬೇಕು, ತುಮಕೂರು ವಿಶ್ವವಿದ್ಯಾಲಯದಲ್ಲಿ ಖಾಯಂ ಕುಲಪತಿ ಇಲ್ಲದ ಕಾರಣ 2021-22ನೇ ಸಾಲಿನ ಘಟಿಕೋತ್ಸವವೇ ಇನ್ನೂ ನಡೆದಿಲ್ಲ. ಹಾಗಾಗಿ, ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಸೇರಿದಂತೆ ವಿಶ್ವವಿದ್ಯಾಲಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಘಟಿಕೋತ್ಸವ ಪ್ರಮಾಣಪತ್ರ ಇಲ್ಲದೆ ಎಲ್ಲದಕ್ಕೂ ಡಿಕ್ಲರೇಷನ್ ಸರ್ಟಿಫಿಕೇಟ್‌ನ್ನು ನೆಚ್ಚಿಕೊಳ್ಳಬೇಕಿದೆ ಎಂದರು.
ನಾಲ್ಕು ಕುಲಪತಿಗಳ ಅವಧಿ ಮುಗಿದರೂ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಪೂರ್ಣವಾಗದಿರುವುದು ಶೈಕ್ಷಣಿಕ ಜಿಲ್ಲೆ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಕಲ್ಪತರು ಜಿಲ್ಲೆಗೆ ಕಪ್ಪುಚುಕ್ಕೆಯೆನಿಸಿದೆ. ಡಾ.ಜಿ. ಪರಮೇಶ್ವರ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ 2004ರಲ್ಲಿ ರಾಜ್ಯದ ಮೊದಲ ಜಿಲ್ಲಾಮಟ್ಟದ ವಿಶ್ವವಿದ್ಯಾಲಯವಾಗಿ ತುಮಕೂರು ವಿಶ್ವವಿದ್ಯಾಲಯವನ್ನು ಅಸ್ಥಿತ್ವಕ್ಕೆ ತರಲಾಯಿತು. ಆದರೆ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕ್ಯಾಂಪಸ್ ನಿರ್ಮಾಣ ಮಾತ್ರ 18 ವರ್ಷ ಪೂರೈಸುತ್ತಾ ಬಂದರೂ ಪೂರ್ಣಗೊಳ್ಳದಿರುವುದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಬೇಸರ ಮೂಡಿಸಿದೆ ಎಂದು ಹೇಳಿದರು. ನಾಗವಲ್ಲಿ ಬಳಿ ಬಿದರೆಕಟ್ಟೆ ಕಾವಲ್ ನಲ್ಲಿ 240.10 ಎಕರೆ ವಿಶ್ವವಿದ್ಯಾಲಯ ಕ್ಯಾಂಪಸ್ ಗೆ ಜಾಗ ಮಂಜೂರಾಗಿ 2016ರಲ್ಲಿ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜೊತೆಗೆ ಬಜೆಟ್ ನಲ್ಲಿ 40 ಕೋಟಿ ಅನುದಾನವನ್ನು ಘೋಷಿಸಲಾಯಿತು. ಅಕಾಡೆಮಿಕ್ ಬ್ಲಾಕ್‌ಗೆ ಅವಶ್ಯಕವಾಗಿರುವ ಕಲಾಭವನ, ಕರ್ನಾಟಕ ವಿಜ್ಞಾನ, ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಕೇಂದ್ರ ಹಾಗೂ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ. ಪಿಜಿ ಕೋರ್ಸಿನ ಸ್ಥಳಾಂತರವು ಅತ್ಯವಶ್ಯಕವಾಗಿದೆ. ಕೋಟಿಗಟ್ಟಲೇ ವೆಚ್ಚ ಮಾಡಿ ಕಾಮಗಾರಿ ಕೈಗೊಂಡಿರುವ ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್ ಆದಷ್ಟು ಶೀಘ್ರವಾಗಿ ಲೋಕಾರ್ಪಣೆಗೊಂಡು ತರಗತಿಗಳು ನಡೆಯಬೇಕಿದೆ ಎಂದು ವಿವರಿಸಿದರು.
ಪ್ರತಿಯೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉದ್ಯೋಗ ಹಾಗೂ ಕೌಶಲ್ಯ ಕೇಂದ್ರಗಳ ಸ್ಥಾಪನೆಗೆ ಮತ್ತು ಪ್ರತಿವರ್ಷ ಕ್ಯಾಂಪಸ್‌ಗಳಲ್ಲಿ ಉದ್ಯೋಗ ಸಂದರ್ಶನ ಮೇಳಗಳನ್ನು ಆಯೋಜಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತುಮಕೂರು ಜಿಲ್ಲಾ ನಾಗರೀಕರ ಕಳಕಳಿಗೆ ಸಹಮತ ವ್ಯಕ್ತಪಡಿಸಿ ತಕ್ಷಣ ಸೂಕ್ತಕ್ರಮ ಕೈಗೊಳ್ಳುವುದಾಗಿ ವಾಗ್ದಾನ ನೀಡಿದರು. ನೂತನ ಕ್ಯಾಂಪಸ್ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ಸದ್ಯದಲ್ಲೇ ಕ್ಯಾಂಪಸ್ ಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿದರು.
ನಿಯೋಗದಲ್ಲಿ ತುಮಕೂರು ವಿವಿ ನಿವೃತ್ತ ಅಧಿಕಾರಿ ದಾಸರಾಜು, ನಿವೃತ್ತ ಪ್ರಾಂಶುಪಾಲ ಪ್ರೊ. ವೀರಯ್ಯ, ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಗಂಗಾಧರ್ ದೇವರಮನೆ, ಗಾಂಧಿ ಪ್ರತಿಷ್ಠಾನ ಅಧ್ಯಕ್ಷ ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಣ್ಣ, ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಎಂ.ಬಸವಯ್ಯ, ಶಿಕ್ಷಣ ತಜ್ಞ ಪ್ರೊ.ಚಂದ್ರಶೇಖರ್, ಆರ್ಥಿಕ ಸಲಹೆಗಾರ ಆಡಿಟರ್ ರಾಮಚಂದ್ರ, ಕಲಾಶ್ರೀ ಡಾ. ಲಕ್ಷ್ಮಣ್ ದಾಸ್, ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಮುರಳೀಕೃಷ್ಣಪ್ಪ ಹಾಗೂ ಇತರರು ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು